ಪ್ರತ್ಯಕ್ಷಪ್ರಮಾಣವಾದ  -
 	ಅತೀಂದ್ರಿಯ ಜ್ಞಾನದ ಸಮಂಜಸತೆಯನ್ನು ನಿರಾಕರಿಸಿ ವೈಜ್ಞಾನಿಕ ಜ್ಞಾನವೇ ಯಥಾರ್ಥವೆಂದು ಸಾರುವ ಒಂದು ವಾದ (ಪಾಸಿಟಿವಿಸಮ್). ಪಾಸಿಟಿವಿಸಮ್ ಎಂಬ ಪದವನ್ನು ಈ ಅರ್ಥದಲ್ಲಿ ಮೊದಲು ಬಳಸಿದವನು ಸಂತ ಸೈಮನ್. ಪಾಶ್ಚಾತ್ಯ ದೇಶಗಳಲ್ಲಿ 19ನೆಯ ಶತಮಾನದ ಅಂತ್ಯದಲ್ಲೂ 20ನೆಯ ಶತಮಾನದ ಆದಿಯಲ್ಲೂ ಈ ವಾದ ಪ್ರಚಲಿತವಿತ್ತು. ಈ ವಾದಕ್ಕೆ ಬೇಕನ್, ಬ್ರಿಟಿಷ್ ಅನುಭವವಾದಿಗಳು; ಫ್ರೆಂಚ್ ಜ್ಞಾನೋದಯ ಕಾಲದ (ಎನ್‍ಲೈಟನ್‍ಮೆಂಟ್) ತತ್ತ್ವಜ್ಞರ ಕೃತಿಗಳೇ ಮೂಲಗ್ರಂಥಗಳು.

	ಈ ವಾದದ ಮೂಲಲಕ್ಷಣಗಳು ಇವು : 1. ವೈಜ್ಞಾನಿಕ ಜ್ಞಾನವೇ ಯಥಾರ್ಥಜ್ಞಾನ. ವಾಸ್ತವಾಂಶಗಳೂ ಇಂದ್ರಿಯಗೋಚರ ವಿಷಯಗಳೂ ಈ ಜ್ಞಾನಕ್ಕೆ ಪ್ರಮೇಯವಸ್ತುಗಳು. 2. ತತ್ತ್ವಶಾಸ್ತ್ರದ ವೈಜ್ಞಾನಿಕ ವಿಧಾನವನ್ನು ಬಿಟ್ಟು ಬೇರೊಂದು ಸಾಧನವನ್ನು ಅವಲಂಬಿಸಿಲ್ಲ 3. ತತ್ತ್ವಶಾಸ್ತ್ರದ ಗುರಿ ಎಲ್ಲ ವಿಜ್ಞಾನಿಗಳಿಗೂ ಸಮಾನವಾದ ಕೆಲ ಸಾಮಾನ್ಯ ನಿಯಮಗಳನ್ನು ಹೊರೆಗೆಡಹುವುದು ಮತ್ತು ಈ ನಿಯಮಗಳನ್ನು ನೀತಿಬದ್ಧ ಸಮಾಜ ರಚನೆಗೆ ತಳಹದಿಗಳನ್ನಾಗಿ ಬಳಸುವುದು. 4. ಪ್ರತ್ಯಕ್ಷ ಗೋಚರವಲ್ಲದ ವಸ್ತುಗಳನ್ನು ಕುರಿತು ಚರ್ಚಿಸುವುದರಿಂದ ಭೌತಾತೀತವಿದ್ಯೆ (ಮೆಟಫಿಸಿಕ್ಸ್) ಅರ್ಥರಹಿತವಾದ್ದು.

	ಎರಡು ವಿಧವಾದ ಪ್ರತ್ಯಕ್ಷ ಪ್ರಮಾಣವಾದಗಳಿವೆ. 1. ಸಾಮಾಜಿಕ ಪ್ರತ್ಯಕ್ಷ ಪ್ರಮಾಣವಾದ, 2. ತಾರ್ಕಿಕ ಪ್ರತ್ಯಕ್ಷಪ್ರಮಾಣವಾದ.

	1. ಸಾಮಾಜಿಕ ಪ್ರತ್ಯಕ್ಷ ಪ್ರಮಾಣವಾದ : ಆಗಸ್ಟ್ ಕಾಂಟ್ ಎಂಬ ಫ್ರೆಂಚ್ ತತ್ತ್ವಜ್ಞಾನಿ ಈ ವಾದದ ಪ್ರತಿಪಾದಕ. ಸಂತ ಸೈಮನ್ನನ ಕೃತಿಗಳೇ ಇವನ ಚಿಂತನೆಗೆ ಸ್ಪೂರ್ತಿ. ವೈಜ್ಞಾನಿಕ ವಿಧಾನವನ್ನು ಅನುಸರಿಸಿ ಮಾಡಿದ ವ್ಶೆಜ್ಞಾನಿಕ ತೀರ್ಮಾನಗಳ ಆಧಾರದ ಮೇಲೆ ನ್ಯಾಯಬದ್ಧ ಸಮಾಜವನ್ನು ಸ್ಥಾಪಿಸುವುದೇ ಇವನ ಆದರ್ಶ. ಇವನ ಪ್ರಕಾರ ವೈಜ್ಞಾನಿಕ ಜ್ಞಾನ ಅಥವಾ ಪ್ರತ್ಯಕ್ಷ ಪ್ರಮಾಣಜ್ಞಾನ ಮಾನವನ ಪರಿಪೂರ್ಣ ವ್ಯಕ್ತಿತ್ವ ಮತ್ತು ಸಮಂಜಸ ಸಾಮಾಜಿಕ ವ್ಯವಸ್ಥೆ -ಈ ಮೂರು ಒಂದು ಐತಿಹಾಸಿಕ ವಿಕಾಸದ ಅಂತಿಮ ಫಲಗಳು. ಈ ವಿಲಾಸ ಮೂರು ಹಂತಗಳಲ್ಲಿ ಸಂಭವಿಸುತ್ತದೆ.

	ಮೊದಲನೆಯದು ಮತಧರ್ಮಶಾಸ್ತ್ರದ (ತಿಯೊಲಜಿ) ಹಂತ. ಕಲ್ಪನಾತ್ಮಕವಾದ್ದು. ವಿಕಾಸದ ಈ ಹಂತದಲ್ಲಿ ಮಾನವ ನಿಸರ್ಗದಲ್ಲಿ ಸಂಭವಿಸುವ ಎಲ್ಲ ಘಟನೆಗಳಿಗೂ ಅತೀಂದ್ರಿಯವಾದ ದೈವೀಶಕ್ತಿಗಳೇ ಕಾರಣವೆಂದು ಭಾವಿಸುತ್ತಾನೆ. ಅವನು ಈ ದೇವತೆಗಳನ್ನು ಮನುಷ್ಯರೂಪದ ಅಚ್ಚಿನಲ್ಲೇ ರೂಪಿಸುತ್ತಾನೆ.

	ಎರಡನೆಯ ಭೌತಾತೀತ ಹಂತದಲ್ಲಿ ಅವನು ಈ ದೇವತೆಗಳನ್ನು ಅಮೂರ್ತವೆಂದು ಭಾವಿಸುತ್ತಾನೆ.

	ವಿಕಾಸ ಪರ್ಯವಸಾನ ಹೊಂದುವುದು ಮೂರನೆಯ ವೈಜ್ಞಾನಿಕ ಹಂತದಲ್ಲಿ ಈ ಹಂತದಲ್ಲಿ ಮಾನವ ಘಟನೆಗಳಿಗೆ ಕಾರಣ ಹುಡುಕುವುದನ್ನು ಸಂಪೂರ್ಣವಾಗಿ ತೊರೆದು, ಆ ಘಟನೆಗಳು ಅಧೀನವಾಗಿರುವ ಸಾಮಾನ್ಯ ನಿಯಮಗಳನ್ನು ಹೊರಗೆಳೆಯಲು ಯತ್ನಿಸುತ್ತಾನೆ. ಈ ನಿಯಮಗಳ ಅರಿವಿನ ಆಧಾರದ ಮೇಲೆ ಮುಂದೆ ಏನು ಸಂಭವಿಸಬಹುದು ಎಂಬುದನ್ನು ಊಹಿಸುತ್ತಾನೆ ಮತ್ತು ಆ ನಿಯಮಗಳನ್ನು ವ್ಯವಹಾರಕ್ಕೆ ಉಪಯೋಗಕರವಾದ ರೀತಿಯಲ್ಲಿ ಬಳಸಿಕೊಳ್ಳುತ್ತಾನೆ. ವಿಜ್ಞಾನದಿಂದ ಊಹೆ, ಊಹೆಯಿಂದ ಪ್ರವೃತ್ತಿ ಎಂಬುದು ಕಾಂಟ್‍ನ ತತ್ತ್ವ. ಅವನ ಪ್ರಕಾರ ನಮ್ಮ ಜೀವನ ನಿರ್ವಹಣೆಗೆ ಉಪಯುಕ್ತವಾಗುವಂಥ ಜ್ಞಾನವೇ ಸರಿಯಾದ ಜ್ಞಾನ.

	ಕಾಂಟ್ ವಿಜ್ಞಾನಗಳನ್ನು ಅವುಗಳ ವಿಷಯ ವ್ಯಾಪ್ತಿಗನುಸಾರವಾಗಿ ಗಣಿತಶಾಸ್ತ್ರ, ಖಗೋಳಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಸಮಾಜಶಾಸ್ತ್ರಗಳೆಂದು ಕ್ರಮವಾಗಿ ವರ್ಗೀಕರಿಸುತ್ತಾನೆ. ಪ್ರತಿ ವಿಜ್ಞಾನವೂ ತನ್ನ ವಿಷಯದ ವ್ಯಾಪ್ತಿಯಲ್ಲಿ ತನ್ನ ಮುಂದಿನ ವಿಜ್ಞಾನಕ್ಕಿಂತಲೂ ಹೆಚ್ಚು ವ್ಯಾಪಕವಾಗಿರುತ್ತದೆ. ಸಮಾಜಶಾಸ್ತ್ರ ಉಳಿದ ವಿಜ್ಞಾನಕ್ಕಿಂತಲೂ ಹೆಚ್ಚು ವ್ಯಾಪಕವಾಗಿರುತ್ತದೆ. ಅಂದರೆ ಅದು ಎಲ್ಲ ವಿಜ್ಞಾನಗಳ ವಿಷಯಗಳನ್ನೂ ಒಳಗೊಂಡಿರುತ್ತದೆ.

	ಕಾಂಟ್ ತರ್ಕಶಾಸ್ತ್ರ ಮತ್ತು ಮನಶ್ಶಾಸ್ತ್ರಗಳನ್ನು ವಿಜ್ಞಾನಗಳೆಂದು ಪರಿಗಣಿಸುವುದಿಲ್ಲ. ತರ್ಕಶಾಸ್ತ್ರ ಮನಸ್ಸಿನ ಚಟುವಟಿಕೆಗಳಿಗೆ ಸಂಬಂಧಿಸಿದ ಶಾಸ್ತ್ರವಾದ್ದರಿಂದ ಅದು ಮನಶ್ಶಾಸ್ತ್ರಕ್ಕೇ ಸೇರಿಕೊಳ್ಳುತ್ತದೆ. ಮನಃಶ್ಶಾಸ್ತ್ರದ ವಿಷಯ ಮನಸ್ಸು ಮತ್ತು ಅದರ ಕ್ರಿಯೆಗಳು, ಮನಸ್ಸು ಬಾಹ್ಯಾವಲೋಕನಕ್ಕೆ ಸಿಲುಕದಂಥ ಅಭೌತತ್ತ್ವ. ಅದು ಆಂತರಿಕ ಅವಲೋಕನಕ್ಕೂ ಸಿಗದ ವಸ್ತು. ಹಾಗೆ ಆಂತರಿಕ ಅವಲೋಕನಕ್ಕೆ ಸಿಲುಕವಂಥ ವಸ್ತುವಾಗಿದ್ದಲ್ಲಿ ಅವಲೋಕಿಸಲ್ಪಡುವ ವಸ್ತುವೂ ಮನಸ್ಸೇ ಆಗಬೇಕಾಗುತ್ತದೆ. ಇದು ಅಸಂಭವನೀಯವಾದ್ದರಿಂದ ಮನಃಶಾಸ್ತ್ರ ವಿಜ್ಞಾನವಾಗಲಾರದು.

	ಕಾಂಟ್ ಸಮಾಜದ ಜ್ಞಾನವನ್ನು ಸ್ಥಿತಿಸಮಾಜಶಾಸ್ತ್ರ ಮತ್ತು ಕ್ರಿಯಾಸಮಾಜಶಾಸ್ತ್ರ ಎಂಬುದಾಗಿ ವಿಂಗಡಿಸುತ್ತಾನೆ. ಸ್ಥಿತಿಸಮಾಜಶಾಸ್ತ್ರ ಸಮಾಜ ವ್ಯವಸ್ಥೆ ತನ್ನ ಶಾಶ್ವತ ಅಸ್ತಿತ್ವಕ್ಕೆ ಅವಲಂಬಿಸಿರುವ ನಿಯಮಗಳನ್ನು ಕುರಿತು ಅಧ್ಯಯನ ಮಾಡುತ್ತದೆ. ಕ್ರಿಯಾಸಮಾಜಶಾಸ್ತ್ರ ಸಮಾಜದ ಅಭಿವೃದ್ಧಿ ಅಥವಾ ಬೆಳೆವಣಿಗೆಗೆ ಅಗತ್ಯವಾಗಿರುವ ನಿಯಮಗಳನ್ನು ಕುರಿತು ಅಧ್ಯಯನ ಮಾಡುತ್ತದೆ. ಬೆಳೆವಣಿಗೆ ಅಥವಾ ವಿಕಾಸವೆಂಬುದು ಪ್ರಕೃತಿಸಿದ್ಧ ನಿಯಮ. ಸಮಾಜ ವಿಕಾಸ ಹೊಂದುತ್ತಿರುತ್ತದೆ. ಈ ವಿಕಾಸ ಅಂತಿಮವಾಗಿ ಮಾನವಿಕತೆಯ ಸಾಕ್ಷಾತ್ಕಾರದಲ್ಲಿ ಪರ್ಯವಸಾನ ಹೊಂದುತ್ತದೆ. ಕಾಂಟ್‍ನ ಚಿಂತನೆಯಲ್ಲಿ ದೇವರು ಎಂಬ ಅತೀಂದ್ರಿಯತತ್ತ್ವಕ್ಕೆ ಸ್ಥಾನವಿಲ್ಲದಿದ್ದರೂ ಈ ಮಾನವಿಕತೆಗೆ ಉತ್ಕøಷ್ಟ ಸ್ಥಾನವಿದೆ. ಸಾಂಪ್ರದಾಯಿಕ ತತ್ತ್ವಜ್ಞರು ಒಪ್ಪಿಕೊಂಡ ದೇವರಸ್ಥಾನವನ್ನು ಮಾನವಿಕತೆಯೆ ಆಕ್ರಮಿಸಿಕೊಳ್ಳಬೇಕೆಂದು ಅವನ್ನು ಘೋಷಿಸುತ್ತಾನೆ. ಅದನ್ನು ಬೃಹತ್ತತ್ತ್ವ ಎಂದು ಕರೆಯುವ ಅವನ ಪ್ರಕಾರ ಅದೇ ಪರಮ ಪೂಜನೀಯ ತತ್ತ್ವ. 

	ಸಂಕ್ಷೇಪವಾಗಿ ಹೇಳಬೇಕೆಂದರೆ ಕಾಂಟ್‍ನ ಪ್ರಕಾರ ತತ್ತ್ವಶಾಸ್ತ್ರ ಒಂದು ವಿಜ್ಞಾನವೇ. ಅದನ್ನು ಸಮಾಜ ವಿಜ್ಞಾನವೆಂದೂ ಕರೆಯುತ್ತಾರೆ. ಮಾನವ ಜೀವನದ ಉದ್ಧಾರವೇ ಧ್ಯೇಯವಾಗಿ ಉಳ್ಳ ಅದು ಎಲ್ಲ ವಿಜ್ಞಾನಗಳ ಒಂದು ಸಂಶ್ಲೇಷಣೆ.

	2 ತಾರ್ಕಿಕ ಪ್ರತ್ಯಕ್ಷ ಪ್ರಮಾಣವಾದ: ಇಪ್ಪತ್ತನೆಯ ಶತಮಾನದ ಬಹಳ ಪ್ರಭಾವಶಾಲೀ ಚಿಂತನೆಗಳಲ್ಲಿ ಇದೂ ಒಂದು. ಇಪ್ಪತ್ತನೆಯ ಶತಮಾನದ ಇಪ್ಪತ್ತರ ದಶಕದಲ್ಲಿ ಇದು ವಿಯೆನ್ನಾದಲ್ಲಿ ಅಸ್ತಿತ್ವಕ್ಕೆ ಬಂತು. ಷ್ಲಿಕ್ ರುಡೋಲ್ಪ್ ಕಾರ್ನಾಪ್, ಅಟೊ ನ್ಯೂರಾತ್ ಈ ವಾದದ ಸಮರ್ಥನಕಾರರಲ್ಲಿ ಮುಖ್ಯಸ್ಥರು.

	ವಾಕ್ಯದ ಅರ್ಥನಿರ್ವಚನೆಯಲ್ಲಿ ಬಹಳ ಆಸಕ್ತಿವಹಿಸುವ ತಾರ್ಕಿಕ ಪ್ರತ್ಯಕ್ಷ ಪ್ರಮಾಣವಾದಿಗಳು ಪರೀಕ್ಷೆಯೇ ವಾಕ್ಯಾರ್ಥಮಾನ ಎಂದು ಸಾರುತ್ತಾರೆ. ಅವರ ಪ್ರಕಾರ ಯಾವುದೇ ಒಂದು ವಾಕ್ಯ ಅರ್ಥಪೂರ್ಣವಾಗಬೇಕಿದ್ದಲ್ಲಿ ಆ ವಾಕ್ಯ ಪರೀಕ್ಷೆಗೆ ಒಳಪಡಿಸಬಹುದಾದ ವಿಷಯವನ್ನು ಹೊಂದಿರಬೇಕು. ಪ್ರಾರಂಭದ ಷ್ಲಿಕ್ ಪ್ರತ್ಯಕ್ಷ ಪರೀಕ್ಷೆಯೇ ವಾಕ್ಯದ ಅರ್ಥಪೂರ್ಣತೆಯನ್ನು ನಿರ್ಧರಿಸುತ್ತದೆಂಬ ಸಂಕುಚಿತ ಅಭಿಪ್ರಾಯವನ್ನು ನೀಡಿದ. ಎಂದರೆ ಇಂದ್ರಿಯಗಳಿಂದಲೇ ನೇರವಾಗಿ ಪರೀಕ್ಷಿಸಬಹುದಾದ ವಿಷಯವನ್ನುಳ್ಳ ವಾಕ್ಯವೇ ಅವನ ಪ್ರಕಾರ ಅರ್ಥಪೂರ್ಣವಾಕ್ಯ. ಈ ದೃಷ್ಟಿಯಿಂದ, ಈ ಗುಲಾಬಿ ಕೆಂಪಗಿದೆ ಎಂಬ ವಾಕ್ಯ ಅರ್ಥಪೂರ್ಣವಾಗಿದೆ. ಆದರೆ ಅಕ್ಬರ್ ಭಾರತದೇಶನ್ನಾಳಿದ ಮೊಗಲ್ ರಾಜ ಎಂಬ ವಾಕ್ಯ ಅರ್ಥರಹಿತವಾದುದು. ಏಕೆಂದರೆ ಅದರ ವಿಷಯವಾದ ಅಕ್ಬರ್ ನೇರ ಪರೀಕ್ಷೆಗೆ ಸಿಗದಂಥ ಭೂತಕಾಲದ ವಸ್ತು.

	ಅನಂತರ ಅದೇ ಷ್ಲಿಕ್ ತನ್ನ ದೃಷ್ಟಿಯನ್ನು ವಿಶಾಲವಾಗಿಸಿಕೊಂಡು ಪರೋಕ್ಷ ಪರೀಕ್ಷೆಯನ್ನೂ ಪರೀಕ್ಷಾಮಾನವಾಗಿ ಬಳಸಿಕೊಂಡ. ಎಂದರೆ ಅರ್ಥಪೂರ್ಣವಾಗಬೇಕಿದ್ದಲ್ಲಿ ವಾಕ್ಯ ಪ್ರತ್ಯಕ್ಷ ಪರೀಕ್ಷೆಗೆ ಸಿಲುಕವಂಥ ವಿಷಯಗಳಿಗೆ ಸಂಬಂಧ ಹೊಂದಿರಬೇಕು; ಹಾಗೆ ಪರೀಕ್ಷಾಸಾಧ್ಯವಾಗಿದ್ದ ಪಕ್ಷದಲ್ಲಿ ಆ ವಿಷಯಕ್ಕೆ ಆಧಾರವಾಗುವಂಥ ನೇರ ಪರೀಕ್ಷೆಗೆ ಗುರಿಪಡಿಸಬಹುದಾದ ದಾಖಲೆಗಳನ್ನು ಹೊಂದಿರಬೇಕು ಎಂದು ಹೇಳಿದ. ಅವನ ಈ ವಿಶಾಲದೃಷ್ಟಿಯಿಂದ ಇತಿಹಾಸಕ್ಕೆ ಸಂಬಂಧಪಟ್ಟ ವಾಕ್ಯಗಳೂ ನೇರವಾಗಿ ಪರೀಕ್ಷಿಸಲು ಸಾಧ್ಯವೇ ಇಲ್ಲದ ವಿಷಯಗಳನ್ನೊಳಗೊಂಡ ಚಂದ್ರನ ಅಂಚಿನ ಭಾಗದಲ್ಲಿ ಪರ್ವತಗಳಿವೆ ಎಂಬಂಥ ವಾಕ್ಯಗಳೂ ಅರ್ಥಪೂರ್ಣವಾಗುತ್ತವೆ. 

	ಪ್ರತ್ಯಕ್ಷ ಅಥವಾ ಪರೋಕ್ಷ ಪರೀಕ್ಷೆಗೆ ಒಳಪಡಿಸಬಹದಾದಂಥ ವಾಕ್ಯಗಳನ್ನು ಸಂಶ್ಲೇಷಣಾತ್ಮಕ ಅಥವಾ ಅನುಭವಾತ್ಮಕ ತರ್ಕವಾಕ್ಯಗಳೆಂದು ಕರೆಯುತ್ತಾರೆ. ಭೌತಶಾಸ್ತ್ರ, ಜೀವಶಾಸ್ತ್ರ, ಸಮಾಜಶಾಸ್ತ್ರವೇ ಮುಂತಾದ ವಾಸ್ತವಿಕ ವಿಜ್ಞಾನಿಗಳ ವಾಕ್ಯಗಳೆಲ್ಲವೂ ಸಂಶ್ಲೇಷಣಾತ್ಮಕವಾಗಿರುತ್ತವೆ.

	ಇಷ್ಟೇ ಅಲ್ಲದೆ ತಾರ್ಕಿಕ ಪ್ರತ್ಯಕ್ಷ ಪ್ರಮಾಣವಾದಿಗಳು ಪ್ರತ್ಯಕ್ಷ ಅಥವಾ ಪರೋಕ್ಷ ಪರೀಕ್ಷೆಗೆ ದೊರೆಯದಿರುವಂಥ ಇನ್ನೂ ಕೆಲವು ವಾಕ್ಯಗಳನ್ನು ಅರ್ಥಪೂರ್ಣವೆಂದು ಪರಿಗಣಿಸುತ್ತಾರೆ. ವಾಕ್ಯಗಳನ್ನು ಅವರು ವಿಶ್ಲೇಷಣಾತ್ಮಕ ತರ್ಕವಾಕ್ಯಗಳೆಂದು ಕರೆಯುತ್ತಾರೆ. ವಿಶ್ಲೇಷಣಾತ್ಮಕ ತರ್ಕವಾಕ್ಯಗಳು ವಿಚಾರದ ಆಕಾರಕ್ಕೆ ಸಂಬಂಧಪಟ್ಟಿರುತ್ತವೆ. ಅವು ಪ್ರಪಂಚದಲ್ಲಿ ಅಸ್ತಿತ್ವದಲ್ಲಿರುವ ವಸ್ತುಗಳನ್ನೇ ವಿಷಯಗಳನ್ನಾಗಿ ಹೊಂದಿಲ್ಲ. ಅಂಥ ವಾಕ್ಯಗಳ ಅರ್ಥಪೂರ್ಣತೆಯನ್ನು ಆ ವಾಕ್ಯಗಳ ಪರಿಶೀಲನೆಯಿಂದಲೇ ನಿರ್ಧರಿಸುತ್ತೇವೆ. ಎಂದರೆ ಆ ವಾಕ್ಯಗಳನ್ನು ಪರಿಶೀಲಿಸಲು ನಿಜವಾಗಿಯೂ ಇರುವ ವಸ್ತುಗಳನ್ನು ನಾವು ಪರೀಕ್ಷಿಸಲು ಹೋಗುವುದಿಲ್ಲ. ಇದು ಅಸಾಧ್ಯವೂ ಹೌದು. ಎಂದರೆ ವಿಶ್ಲೇಷಣಾತ್ಮಕ ವಾಕ್ಯಗಳಲ್ಲಿ ಅವಶ್ಯಕವಾಗಿ ಅಂತರ್ಗತವಾಗಿರುವ ಅರ್ಥವನ್ನು ಮಾತ್ರ ನಾವು ಹೊರಗಳೆಯುತ್ತೇವೆ. ಹೀಗೆ ಹೊರಗೆಳೆಯಲು ಸಂಕೇತ ಮತ್ತು ಅನಿರ್ದಿಷ್ಟ ಮೌಲ್ಯಗಳನ್ನೂ ಬಳಸುತ್ತೇವೆ. ಕೇವಲ ವಾಕ್ಯಗಳಲ್ಲಿ ಹುದುಗಿರುವ ಅರ್ಥವನ್ನು ನಾವು ವ್ಯಕ್ತಪಡಿಸುವುದರಿಂದ ಅವನ್ನು ಪುನರುಕ್ತಿಗಳೆಂದೂ ಕರೆಯುತ್ತಾರೆ. ವಿಚಾರದ ಆಕಾರಕ್ಕೆ ಸಂಬಂಧಪಟ್ಟ ತರ್ಕ ಮತ್ತು ಶುದ್ಧಗಣಿತಶಾಸ್ತ್ರದ ವಾಕ್ಯಗಳೆಲ್ಲವೂ ವಿಶ್ಲೇಷಣಾತ್ಮಕವಾಗಿರುತ್ತವೆ. ಉದಾಹರಣೆಗೆ ತ್ರಿಕೋಣದ ಎಲ್ಲ ಕೋನಗಳ ಮೊತ್ತ 1800ಗೆ ಸಮ ಎಂಬ ವಾಕ್ಯದಲ್ಲಿ ನಾವು ತೋರಿಸುತ್ತಿರುವುದು ಪ್ರಪಂಚದಲ್ಲಿ ತ್ರಿಕೋನವೆಂಬ ವಸ್ತುವಿನ ಅಸ್ತಿತ್ವವನ್ನಲ್ಲ ಅಥವಾ ಈ ವಾಕ್ಯ ತನ್ನ ಅರ್ಥಪೂರ್ಣತೆಗೆ ಅವಶ್ಯವಾಗಿ ತ್ರಿಕೋನವೆಂಬ ವಸ್ತುವನ್ನು ಅವಲಂಬಿಸಿದೆಯೆಂದೂ ನಾವು ಇಲ್ಲಿ ಹೇಳುತ್ತಿಲ್ಲ. ನಾವು ಇಲ್ಲಿ ಹೇಳುತ್ತಿರುವುದು ತ್ರಿಕೋಬವೆಂಬ ಪದದ ವ್ಯಾಖ್ಯೆಯಲ್ಲಿ ಅಂತರ್ಗತವಾಗಿರುವ ಅರ್ಥವನ್ನು ಮಾತ್ರ. ವಿಶ್ಲೇಷಣಾತ್ಮಕವಾಕ್ಯಗಳಿಗೆ ಮತ್ತೊಂದು ಉದಾಹರಣೆ
ಎ=ಬಿ. ಬಿ=ಸಿ. ಆದ್ದರಿಂದ ಎ=ಸಿ.

	ಆದ್ದರಿಂದ ತಾರ್ಕಿಕ ಪ್ರತ್ಯಕ್ಷ ಪ್ರಮಾಣವಾದಿಗಳ ಪ್ರಕಾರ ತರ್ಕವಾಕ್ಯಗಳು ಎರಡು ವಿಧ. ವಿಶ್ಲೇಷಣಾತ್ಮಕ ಮತ್ತು ಸಂಶ್ಲೇಷಣಾತ್ಮಕ ವಾಕ್ಯಗಳು. ವಿಶ್ಲೇಷಣಾತ್ಮಕ ವಾಕ್ಯಗಳು ಪುನರುಕ್ತಿಗಳಾದರೆ ಸಂಶ್ಲೇಷಣಾತ್ಮಕ ವಾಕ್ಯಗಳು ಅನುಭವಾತ್ಮಕ ಅಂಶಗಳನ್ನು ಒಳಗೊಂಡಿರುತ್ತವೆ. ತರ್ಕವಾಕ್ಯಗಳ ಈ ವರ್ಗೀಕರಣದ ಬೆಳಕಿನಲ್ಲಿ ತಾರ್ಕಿಕ ಪ್ರತ್ಯಕ್ಷಪ್ರಮಾಣವಾದಿಗಳು ಭೌತಾತೀತ ವಿದ್ಯೆಯ ವಾಕ್ಯಗಳನ್ನು ವಿಮರ್ಶೆಯ ಒರೆಗಲ್ಲಿಗೆ ಹಚ್ಚುತ್ತಾರೆ. ಅವರ ಪ್ರಕಾರ ವಾಕ್ಯ ಅರ್ಥಪೂರ್ಣತೆಯನ್ನು ಹೊಂದಿರಬೇಕಾದಲ್ಲಿ ಮೇಲಿನ ಎರಡು ವಿಧದ ವಾಕ್ಯದಲ್ಲಿ ಒಂದಾದರೂ ಆಗಿರಬೇಕು. ಈ ಎರಡೂ ಗುಂಪಿಗೂ ಸೇರದ ವಾಕ್ಯಗಳನ್ನು ಅವರು ಅರ್ಥರಹಿತ ವಾಕ್ಯಗಳೆಂದು ಪರಿಗಣಿಸುತ್ತಾರೆ. ಈ ದೃಷ್ಟಿಯಿಂದ ಭೌತಾತೀತವಿದ್ಯೆಗೆ ಸೇರಿದ ಅನೇಕ ಹೇಳಿಕೆಗಳೂ ಅರ್ಥರಹಿತವಾಗುತ್ರವೆ. ಆ ವಾಕ್ಯಗಳು ಸಂಶ್ಲೇಷಣಾತ್ಮಕವಾಗಿಯಾಗಲಿ ವಿಶ್ಲೇಷಣಾತ್ಮಕವಾಗಿಯಾಗಲಿ ಇರುವುದಿಲ್ಲವಾದ್ದರಿಂದ ಅವೆಲ್ಲ ಅಸಂಬದ್ಧವಾಗಿರುತ್ತವೆ. ಎಂದರೆ ಅಂಥ ವಾಕ್ಯಗಳ ಸತ್ಯಾಸತ್ಯತೆಗಳನ್ನು ನಿರ್ಧರಿಸುವುದು ಅಸಾಧ್ಯ. ಏಕೆಂದರೆ ಅವುಗಳಲ್ಲಿ ಯಾವ ಸತ್ಯವೂ ಅಂತರ್ಗತವಾಗಿರುವುದಿಲ್ಲ ಮತ್ತು ಅವು ಅನುಭವ ಗೋಚರವಾಗುವ ವಿಷಯಗಳನ್ನು ಹೊಂದಿಲ್ಲ. ಭೌತಾತೀತವಿದ್ಯೆಯ ಅನೇಕ ಸಮಸ್ಯೆಗಳು ಕೇವಲ ಕೋರಿಕೆಯ ಸಮಸ್ಯೆಗಳಾಗಿರುತ್ತವೆ. ಅಂಥ ಸಮಸ್ಯೆಗಳಿಗೆ ನೀಡಲಾಗಿರುವ ಪರಿಹಾರಗಳೂ ಅಸಂಬದ್ಧವಾಗಿರುತ್ತವೆ.

	ತಾರ್ಕಿಕ ಪ್ರತ್ಯಕ್ಷ ಪ್ರಮಾಣವಾದಿಗಳ ಪ್ರಕಾರ, ನೀತಿಶಾಸ್ತ್ರದ ವಾಕ್ಯಗಳೂ ಅರ್ಥರಹಿತವೆ. ಏರ್ ಎಂಬಾತ ಹೀಗೆ ಹೇಳುತ್ತಾನೆ ನೀತಿಶಾಸ್ತ್ರದ ವಾಕ್ಯಗಳು ನಿಜವಾದ ತರ್ಕವಾಕ್ಯಗಳಲ್ಲ. ಅವು ಮನುಷ್ಯನನ್ನು ನಿರ್ದಿಷ್ಟ ಕಾರ್ಯದಲ್ಲಿ ಪ್ರವೃತ್ತನನ್ನಾಗಿ ಮಾಡಲು ನೀಡಲಾಗಿರುವ ಅಜ್ಞಾರ್ಥಕವಾಕ್ಯಗಳು. ಆದ್ದರಿಂದ ಕಳ್ಳತನ ಕೆಟ್ಟದ್ದು; ಸತ್ಯವನ್ನೇ ನುಡಿಯಬೇಕು ಎಂಬಂಥ ನೀತಿಶಾಸ್ತ್ರ ಹೇಳಿಕೆಗಳಿಗೆ ಭಾವುಕ ಅರ್ಥಪೂರ್ಣತೆ ಮಾತ್ರ ಇರುತ್ತದೆ.

	ಒಟ್ಟಿನಲ್ಲಿ ಪ್ರತ್ಯಕ್ಷ ಪ್ರಮಾಣವಾದಿಗಳೂ ಪ್ರತ್ಯಕ್ಷವನ್ನೇ ಮೂಲವಾಗಿಟ್ಟುಕೊಂಡ ತತ್ತ್ವಶೋಧನೆಗೆ ಪ್ರಯತ್ನಿಸುತ್ತಾರೆ. ಭೌತಾತೀತವಿದ್ಯೆಯನ್ನು ಸಂಪೂರ್ಣವಾಗಿ ನಿರಾಕರಿಸುವ ಅವರು ಅನಂತರದ ಸಮಕಾಲೀನ ತತ್ತ್ವಜ್ಞರ ತೀವ್ರವಿಮರ್ಶೆಗೆ ಗುರಿಯಾಗಿದ್ದಾರೆ.
(ಎಸ್.ಎಸ್.ಆರ್.; ಪಿ.ಎಚ್.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ